ಕೂಡಲ ಸಂಗಮ

	ಕೃಷ್ಣಾನದಿಯೊಂದಿಗೆ ಮಲಪ್ರಭಾ ನದಿ ಸೇರುವ ಸ್ಥಳ. ಒಂದು ಪುಣ್ಯಕ್ಷೇತ್ರ. ಬಿಜಾಪುರ ಜಿಲ್ಲೆಯ ಹುನಗುಂದದ ಉತ್ತರಕ್ಕೆ ಹತ್ತು ಮೈಲಿ ದೂರದಲ್ಲಿದೆ. ಇಲ್ಲಿ ಚಾಳುಕ್ಯ ಶೈಲಿಯಲ್ಲಿ ಕಟ್ಟಿದ ಸಂಗಮೇಶ್ವರ ದೇವಸ್ಥಾನವಿದೆ. ಇಲ್ಲಿರುವ ಶಿವಲಿಂಗ ಪ್ರಸಿದ್ಧವಾದುದು. ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. 12ನೆಯ ಶತಮಾನದಲ್ಲಿ ಕುಲಪತಿ ಜಾತವೇದಮುನಿ ಒಂದು ವಿದ್ಯಾಕೇಂದ್ರವನ್ನು ಇಲ್ಲಿ ಸ್ಥಾಪಿಸಿದ್ದನೆಂದೂ ಈತನ ಆಶ್ರಮದಲ್ಲಿ ಬಸವೇಶ್ವರ, ಚೆನ್ನಬಸವಣ್ಣ, ಅಕ್ಕನಾಗಮ್ಮ ಮೊದಲಾದವರು ಇದ್ದರೆಂದೂ ಹೇಳಲಾಗಿದೆ. ವೀರಶೈವ ಮತೋದ್ಧಾರಕ ಬಸವಣ್ಣನವರ ಆರಾಧ್ಯದೈವ ಸಂಗಮನಾಥ. ಇವರ ವಚನಗಳ ಅಂಕಿತವಾದ ಕೂಡಲಸಂಗಮದೇವ ಈ ದೇವನೇ. ಇವರ ಬಾಲ್ಯ ಹಾಗೂ ವಿದ್ಯಾಭ್ಯಾಸ ಇಲ್ಲಿ ನಡೆಯಿತೆಂದೂ ಕಲ್ಯಾಣದಲ್ಲಿ ಬಿಜ್ಜಳನ ರಾಜ್ಯದಲ್ಲಿ ಪ್ರಧಾನಿಯಾದ ಮೇಲೆ ಇವರು ಧಾರ್ಮಿಕ ಹಾಗೂ ರಾಜಕೀಯ ಒತ್ತಡಕ್ಕೆ ಸಿಲುಕಿದಾಗ ಸಂಗಮಕ್ಕೆ ಹಿಂದಿರುಗಿ ಕೂಡಲ ಸಂಗಮನಲ್ಲಿ ಐಕ್ಯರಾದರೆಂದೂ ಚರಿತ್ರೆಯಿಂದ ತಿಳಿದು ಬರುತ್ತದೆ. ಐಹೊಳೆ, ಪಟ್ಟದಕಲ್ಲು, ರಕ್ಕಸತಂಗಡಿ, ಮಹಾಕೂಟ, ಬಾದಾಮಿ-ಇವು ಕೂಡಲ ಸಂಗಮದ ಸಮೀಪದಲ್ಲಿವೆ. ಇಲ್ಲೊಂದು ಪ್ರೌಢಶಾಲೆಯಿದೆ.

(ಬಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ